ಫಾರ್‍ಸ್ಟರ್, ಎಡ್ವರ್ಡ್ ಮೋರ್ಗನ್
1879-, ಪ್ರಸಿದ್ಧ ಕಾದಂಬರಿಕಾರ. ಹುಟ್ಟಿದ್ದು ಲಂಡನ್ನಿನಲ್ಲಿ. ವಿದ್ಯಾಭ್ಯಾಸ ಟೋನ್‍ಬ್ರಿಜ್‍ನ ಶಾಲೆಯಲ್ಲಿ ಮತ್ತು ಕೇಂಬ್ರಿಜ್‍ನ ಕಿಂಗ್ಸ್ ಕಾಲೇಜಿನಲ್ಲಿ. ಅಲ್ಲಿ ತತ್ತ್ವಶಾಸ್ತ್ರಜ್ಞ ಜಿ. ಲೋವೆಸ್ ಡಿಕಿನ್‍ಸನ್ನಿನ ಪರಿಚಯವಾಯಿತು. ಆತನ ಜೀವನ ಚರಿತ್ರೆಯನ್ನು 1934ರಲ್ಲಿ ಬರೆದ. ಕೆಲಕಾಲ ಇಟಲಿಯನ್ನು ಅಲ್ಲಿನ ಹಿನ್ನೆಲೆಯಲ್ಲಿ ವೇರ್ ಎಂಜಲ್ಸ್ ಫಿಯರ್ ಟು ಟ್ರೆಡ್ (1905), ಎ ರೂಮ್ ವಿತ್ ಎ ವ್ಯೂ (1908) ಎಂಬ ಕಾದಂಬರಿಗಳನ್ನು ಬರೆದ. ದಿ ಲಾಂಗೆಸ್ಸ್ ಜರ್ನಿ (1907) ಎಂಬುದು ಕೇಂಬ್ರಿಜ್ ಜೀವನವನ್ನು ಚಿತ್ರಿಸುತ್ತದೆ. ಹೋವಡ್ರ್ಸ್ ಎಂಡ್ ಎಂಬ ಕೃತಿ ಭಾರತಕ್ಕೆ ಪ್ರಯಾಣ ಮಾಡುವ ಮೊದಲು ರಚಿತವಾದ್ದು (1910). ಈತನ ಪ್ರಖ್ಯಾತ ಕಾದಂಬರಿ ಎ ಪ್ಯಾಸೇಜ್ ಟು ಇಂಡಿಯ ಎಂಬುದಕ್ಕೆ ಟೇಟ್ ಬ್ಲ್ಯಾಕ್ ಮೆಮೋರಿಯಲ್ ಬಹುಮಾನ ಬಂತು (1925). ಒಂದನೆಯ ಮಹಾಯುದ್ಧ ಕಾಲದಲ್ಲೀತ ಅಲೆಕ್ಸಾಂಡ್ರಿಯದಲ್ಲಿದ್ದ. ಆ್ಯಸ್ಟೆಕ್ಟ್ಸ್ ಆಫ್ ದಿ ನಾವೆಲ್ ಎಂಬ ವಿಷಯವಾಗಿ ಈತ 1927ರಲ್ಲಿ ಕೇಂಬ್ರಿಚ್ ಕ್ಲಾರ್ಕ್ ಲೆಕ್ಜರ್ಸ್ ಮಾಲೆಯಲ್ಲಿ ಭಾಷಣ ಮಾಡಿದ. ಅದು ಅನಂತರ ಪುಸ್ತಕರೂಪದಲ್ಲಿ ಹೊರಬಂತು. ಖ್ಯಾತ ಲೇಖಕಿ ವರ್ಜೀನಿಯ ವುಲ್ಫ್‍ಳನ್ನು ಕುರಿತಂತೆ ಒಂದು ವಿಮರ್ಶನ ಗ್ರಂಥವನ್ನು ಈತ 1942ರಲ್ಲಿ ಬರೆದ. ದಿ ಸೆಲೆಸ್ಟಿಯಲ್ ಆಮ್ನೀಸಸ್ (1923) ಮತ್ತು ದಿ ಇಟರ್ನಲ್ ಮೊಮೆಂಡ್ (1928)-ಎಂಬುದು ಕಥಾಸಂಕಲನಗಳು, ದಿ ಹಿಲ್ ಆಫ್ ದೇವಿ (1953) ಎಂಬುದು ಈತನ ಭಾರತದ ಅನುಭವಗಳನ್ನು ಚಿತ್ರಿಸುವ ಪುಸ್ತಕ. 1953ರಲ್ಲಿ ಈತನಿಗೆ ಕಂಪ್ಯಾನಿಯನ್ ಆಫ್ ಆನರ್ ಎಂಬ ಪ್ರಶಸ್ತಿಯೂ 1961ರಲ್ಲಿ ದಿ ರಾಯಲ್ ಸೊಸೈಟಿ ಆಫ್ ಲಿಟರೇಚರ್ ಸಂಸ್ಥೆಯ ಕಂಪ್ಯಾನಿಯನ್ ಆಫ್ ಲಿಟರೇಚರ್ ಪ್ರಶಸ್ತಿಯೂ ಲಭಿಸಿದವು. 
(ಎಲ್.ಎಸ್.ಎಸ್.; ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ